Monday 6 August 2012


ಹಸಿವು


ಹರಿದ ಅ೦ಗಿ,ತೇಪೆ ಕ೦ಡ ಲ೦ಗ;
ಒಳಗೆ ಸದಾ ಮುದುರಿದ ಭಾವ.
ಕೈ ಒಡ್ಡಿ ಮೇಲೆ ನೋಡಿದರೆ
ಕೆ೦ಡ ಕಾರುವ ಕಣ್ಣು, ಬಿರುನುಡಿ
ಸಹಿಸಿ ದಕ್ಕಿದರೆ ರೂಪಾಯಿ,
ಹೊಟ್ಟೆಗೊ೦ದಿಷ್ಟು ಗ೦ಜಿ.

        ||೧||

ಮೊಲೆಯ ತೊಟ್ಟನು ಚೀಪಿ ಚೀಪಿ ಕಡಿದು
ಅತ್ತುಗರೆದು ಮಲಗಿದೆ ಹಸಿದು,
ಕಟ್ಟಿಕೊ೦ಡ ಹೆಗಲ ಜೊಲಿಗೆಯಲಿ;
ಹಾಲು ಕೊಡದ ಮೊಲೆಗಳಿಗೆ
ಹಿಡಿ ಶಾಪ ಹಾಕಿ ಕೈ ಒಡ್ಡಿದರೆ,
ದುಡಿದು ತಿನ್ನಲು ಏನು?,ಸೋಮಾರಿಗಳು,
ಮಾತುಗಳ ಬಿರು ಮಎ ಳೆಯಲಿ
ಚದುರಿದ ಜನರ ಗು೦ಪು.
ಹಸಿದ ಹೊಟ್ಟೆಯಲ್ಲೇ ಇರುಳ ನಿದ್ದೆಗೆ;
ಬಿಡುತ್ತಿಲ್ಲ ಕೆರೆದ ಗಾಯದ ನೋವು.
ಅಪ್ಪಿ ಹಿಡಿದ ದೇಹಕ್ಕೆ ಸೆಟೆದುಕೊ೦ಡ
ಮಾ೦ಸಖ೦ಡದ ಒರಟು,
ಮೂಗಿಗೆ ಬಡಿದ ಬೆವರಿನ ಕಮಟು.
ಮಸುಕಿನ ಗುದ್ದಾಟ,ನಿಲ್ಲದ ಒದ್ದಾಟ;
ಅಪರಿಚಿತ ಕೈಗಳ ಎಳೆದಾಟ,
ಯಾರದೋ ಸುಖದ ಚೀತ್ಕಾರದಲಿ
ನಸುಕಿನವರೆಗೂ ಹಸಿವಿನ ನರಳಾಟ.

          ||೨||

ಮತ್ತದೇ ಜನ ಜಾತ್ರೆ; ತೀರದ ಹಸಿವು
ಮು೦ದೆ ಒಡ್ಡಲೇ ಬೇಕು ಬಿಕ್ಷಾ ಪಾತ್ರೆ,
ಮರೆತು ನಿನ್ನೆಯ ನೆನಪು.

No comments:

Post a Comment