Saturday 8 July 2017

#BGGROUP  @ #ಬಿಜಾಪುರ
#PART 2

#ಕೋಲಾರ್ #ಸೇತುವೆ

#ಗೋಲಗುಂಬಜ್

ದಾರಿ ಸಾಗಿದಷ್ಟೂ ನೋಡುವ ಕಣ್ಣುಗಳಿಗೆ ನೆನಪಿನ ಮೂಟೆಗಳನ್ನೇ ಕಟ್ಟಿಕೊಡುತ್ತದೆ. ಎಲ್ಲಾ ಪ್ರಯಾಣಗಳು ಒಂದೇ ತರಹ ಅಂತೂ ಇರಲು ಸಾಧ್ಯವಿಲ್ಲ. ಕಣ್ಣುಗಳಲ್ಲಿ ಗುರಿಯ ಕಾಣುವ ಆತುರವಿದ್ದಾಗ ಕ್ಣಣಗಳೆಲ್ಲಾ ಯುಗದಂತಾಗಿ ಕಣ್ಣಿಗೆ ಕುದುರೆಪಟ್ಟಿ ಕಟ್ಟಿದಂತೆ ಎದುರು ನೋಡುತ್ತಾ ಎಂದಿಗೆ ಮುಗಿಯುವುದು ಈ ಪ್ರಯಾಣ ಅನ್ನಿಸಿದರೆ ಮತ್ತೊಂದು ರೀತಿಯ ಪ್ರಯಾಣವಿದೆ, ಲಂಗು ಲಗಾಮಿಲ್ಲದ ಕುದುರೆಯನ್ನು ಮೇಯಲು ಬಿಟ್ಟಂತೆ. ಇಷ್ಟ ಬಂದ ಕಡೆ ನಿಂತು, ಗೊತ್ತುಗುರಿಯಿಲ್ಲದೇ , ಸುತ್ತಮುತ್ತಲಿನ ಪ್ರಕೃತಿಯನ್ನೆಲ್ಲಾ ಕಣ್ಮನದೊಳಗೆ ತುಂಬಿಕೊಂಡು ಸಾಗುವ ಪ್ರಯಾಣ ಅದು. ಅದರಲ್ಲೂ ಜೊತೆಯಾಗಿ ಚಡ್ಡೀದೋಸ್ತ್ ಗಳಿದ್ದರಂತೂ ಮತ್ತೆ ಸ್ವರ್ಗ ಕೈಗೆಟುಕಿದಂತೆಯೇ ಸರಿ. ಅದೂ ಅಲ್ಲದೇ ನಾವು ನಾವಾಗಿಯೇ ಇರುವುದು ನಮ್ಮ ಅಂತರಂಗದ ಗೆಳೆಯರೊಂದಿಗೆ ಮಾತ್ರ. ಅಲ್ಲಿ ಎಲ್ಲವೂ ಖುಲ್ಲಂ ಖುಲ್ಲ. ಉಪೇಂದ್ರ ಹೇಳಿದ ಹಾಗೆ ಮನಸ್ಸು ಹಾಗೂ ನಾಲಿಗೆಯ ನಡುವೆ ಫಿಲ್ಟರೇ ಇರಲ್ಲ. ಆದರೆ ಬೇರೆಲ್ಲಾ ಸಂಬಂಧಗಳೊಡನೆ ನಾವು ವ್ಯವಹರಿಸುವುದು ಮುಖವಾಡ ಹಾಕಿಕೊಂಡೇ. ಈ ಸಮಾಜ ಅಂದರೆ ಬರೇ ಮುಖವಾಡಗಳ ನಡುವಿನ ವ್ಯವಹಾರ.  ಆದರೆ ನನ್ನ ಈ ಪ್ರಯಾಣದಲ್ಲಿ ಅಂತರಂಗದ ಗೆಳೆಯರಿದ್ರು. ಹಾಗೆಂದೇ ಒಂದು ಚಂದದ ಅನುಭೂತಿಯಲ್ಲಿತ್ತು ನಮ್ಮನ್ನು ಏರಿಸಿಕೊಂಡು ಸಾಗುತ್ತಿದ್ದ ಹೊಸ್ಮನಿ ಕಾರು.

ಕೊರ್ತಿಕೋಲಾರ್ ಮೊಸರವಲಕ್ಕಿ ತಿಂದು ಹೊಟ್ಟೆ ತಂಪು ಮಾಡಿಕೊಂಡ ನಾನು ರಸ್ತೆಯ ಇಕ್ಕೆಲಗಳಲ್ಲಿ ಕಾಣುತ್ತಿದ್ದ ವಿಶಾಲ ಬಯಲನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಭವ್ಯತೆಯ ಎದುರು ಮನುಷ್ಯ ತನ್ನ ಇರುವಿಕೆಯನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಸದಾ ವಿಫಲನಾಗಿತ್ತಾನೆ. ಈ ವಿಶಾಲ ಬಯಲಿನಲ್ಲಿ ಎಲ್ಲವೂ ಚುಕ್ಕೆಯಂತೆ ಕಾಣುತ್ತದೆ. ನಿಜ,  ಬಯಲಿನಲ್ಲಿ ಮತ್ತೆಂದೂ ಸಿಗದ ಹಾಗೆ ಕಳೆದುಹೋಗಬೇಕು. ತನ್ನೆಲ್ಲಾ ಒಣ ಪ್ರತಿಷ್ಟೆ, ಸ್ಥಾನಮಾನ, ಮೋಹಗಳನ್ನು ಕಳೆದುಕೊಂಡು  ಈ  ವಿಶಾಲ ಬಯಲಿನಲ್ಲಿ ತಾನೂ ಒಂದು ಬಯಲಾಗಬೇಕು, ಭವ್ಯವಾಗಬೇಕು. ಮೋಹ ಕಳೆವಾಟದ ಈ ಬಯಲೆಂದರೆ ನನ್ನಲ್ಲಿ ಎಂದಿಗೂ ಆರದ ಮೋಹ.

ಎಷ್ಟೆಂದರೂ ಇದು ಕೃಷ್ಣ ನದಿಯ ಬಯಲಲ್ಲವೇ? ಇಲ್ಲಿ ಎಲ್ಲವೂ ವಿಶಾಲ, ಎಲ್ಲವೂ ಭವ್ಯ. ಇದಕ್ಕೊಂದು ಒಳ್ಳೆಯ ಉದಾಹರಣೆಯಾಗಿ ಸಿಕ್ಕಿದ್ದು ನಾವು ದಾಟಿಕೊಂಡು ಮುಂದೆ ಸಾಗಿದ ಮೂರು ಕಿ.ಮೀ. ಉದ್ದದ ಸೇತುವೆ! ಕೃಷ್ಣಾ ನದಿಗೆ ಅಡ್ಡಲಾಗಿ ಹುಬ್ಬಳ್ಳಿ ಬಿಜಾಪುರವನ್ನು ಜೋಡಿಸುವ ಈ ಭವ್ಯ ಸೇತುವೆಯ ಉದ್ದ ಬರೋಬ್ಬರಿ ೩ ಕಿ.ಮೀ! ದಕ್ಷಿಣ ಭಾರತದಲ್ಲೇ ಅತೀ ಉದ್ದದ ಸೇತುವೆ. ಬರೋಬ್ಬರಿ ಸೇತುವೆಯ ನಡುವೆ ತಂದು ಗಾಡಿ ನಿಲ್ಲಿಸಿ ಇಳಿದ ಮೇಲೆ ಪಳಗಿದ ಗೈಡ್ ನಂತೆ ಈ ಸೇತುವೆಯ ಕುರಿತು ಹೆಮ್ಮೆಯಿಂದ ಹೇಳಿದ‌ ಹೊಸ್ಮನಿ! ನಿಜಕ್ಕೂ ನನಗೆ ಮುಂದೆ ಸಾಗುವ ಇಷ್ಟವಿರಲಿಲ್ಲ. ಅಲ್ಲಿ ಕಳೆದ ಸಮಯ ಒಂದು ಹೊಸ ಒಳನೋಟವನ್ನು , ಹೊಸ ಅನುಭೂತಿಯನ್ನು ಕೊಟ್ಟು ಮತ್ತೆ ಮತ್ತೆ ಈ ಬಯಲಿಗೆ ನನ್ನನ್ನು ಎಳೆದವು ಬಲವಾಗಿ.ಎಲ್ಲವೂ ಮೋಹ ಕಳೆವಾಟ!

ಈ ದಾರಿಗಳು
ಸುಮ್ಮನೇ ಬಿದ್ದುಕೊಂಡಿರುತ್ತವೆ
ಹೊಟ್ಟೆ ತುಂಬಿದ ಹೆಬ್ಬಾವಿನಂತೆ.
ಅಸಲಿಗೆ ಈ ದಾರಿಗಳಿಗೆ
ಯಾವ ಆದಿಯೂ ಇಲ್ಲ
ಅಂತ್ಯವೂ ಇಲ್ಲ.
ಅವೆರಡೂ ಒಂದೇ ಬಿಂದುವಿನಲ್ಲಿ
ಮುಖಮುಖಿಯಾಗುತ್ತವೆ.

ನಿನ್ನನ್ನು ದಾಟಿ ಬಂದಿದ್ದೇನೆ....
ಅನ್ನುವ ಅಹಮಿಕೆಯೆಲ್ಲಾ
ದಾರಿ ಮಧ್ಯದ ಮಾತಷ್ಟೇ ಹೊರತು
ಇನ್ನೇನೂ ಇಲ್ಲ.
ಸುತ್ತಿ ಸುತ್ತಿ ಬಸವಳಿದು
ಓಟ ಮುಗಿಸಿದಾಗ ನಮ್ಮ ಅಸ್ತಿತ್ವಕ್ಕಿಲ್ಲಿ
ಯಾವ ಅರ್ಥವೂ ಉಳಿದಿರುವುದಿಲ್ಲ....!

ಬಿಜಾಪುರ ಸೇರಿದಾಗ ಮಧ್ಯಾನ್ಹ ೧೨ಗಂಟೆ. ನಾನು ಮೊದಲೊಮ್ಮೆ ನೋಡಿದ್ದ ಗೋಲ್ ಗುಂಬಜ್ ಗೆ ಹೊಸಬ ಯತೀಶನ್ನು ಕರೆದುಕೊಂಡು ಅನುಭವಿ ಗೈಡ್ ನಂತೆ ಮುಂದೆ ಸಾಗಿ ಗೋಲ್ ಗುಂಬಜ್ ನ್ನು ನನಗೆ ತಿಳಿದ ಮಟ್ಟಿಗೆ ತಿಳಿಸಿದೆ. ಅಲ್ಲೂ ಭವ್ಯತೆಯಿತ್ತು, ಸೌಂದರ್ಯವಿತ್ತು, ಆಳಿದ ಬಹುಮನಿ ಸುಲ್ತಾನರ ಕುರುಹುಗಳಿತ್ತು. ಹೋದ ಸಲ ಇಲ್ಲಿ ನನ್ನ ಮಂಗಳೂರಿನ ಸ್ನೇಹಿತರೊಂದಿಗೆ ಬಂದಿದ್ದಾಗ ತುಂಬಾ ಒಳ್ಳೆಯ ಗೈಡ್ ಸಿಕ್ಕಿದ್ರು. ಗುಂಬಜ್ ಮೇಲೆ ಹಾಡು ಹಾಡಿ ಅದು ಪ್ರತಿಧ್ವನಿಸುವ ವಿಶೇಷವನ್ನು ಹೇಳಿ ಬೆರಗುಮೂಡಿಸಿದ್ದು ಅವರು ಇನ್ನೂ ನನ್ನ ನೆನಪಲ್ಲಿ ಉಳಿದುದಕ್ಕೆ ಕಾರಣ ಹೌದಾದರೂ ಇನ್ನೂ ಒಂದು ಬಹು ಮುಖ್ಯ ಕಾರಣ ಅವರಂದು ನಮ್ಮ ಬಡಕಲು ದೇಹಗಳನ್ನು ನೋಡಿ ಆಡಿದ ಒಂದು ಡಯಲಾಗ್!

"ನೀವೇನ್ರೀ, ಮಂಗ್ಳೂರ್ ಮಂದಿ.
ಅಕ್ಕಿ ತಿಂದು ಹಕ್ಕಿ ತರಹ ಆಗಿದೀರಿ...

ನಾವು ಬಿಜಾಪುರ್ ಮಂದಿ ನೋಡ್ರೀ ಹ್ಯಾಗ್
ಜೋಳ ತಿಂದ್ ತೋಳ ತರ ಅದೆವ್ರೀ...."

ಅಂತ ಹೇಳಿದಾಗ ನಮಗೆ ನಗು ತಡೆಯಲಾಗಿರಲಿಲ್ಲ. ಈಗಲೂ ಆ ನೆನಪಾಗಿ ನಗುವಿನ ಹೊನಲೇ ಹರಿಯಿತು.

ಪ್ರಯಾಣ ಮುಂದುವರೆಯುವುದು...

No comments:

Post a Comment