Thursday 15 December 2016

ಅವಳನ್ನು ಬಿಟ್ಟು ಒಬ್ಬನೇ
ಹೊರಟು ನಿಂತಾಗಲೆಲ್ಲಾ ಕೋಪಿಸಿಕೊಂಡಳು;
"ನಾನೊಬ್ಬಳೇ ಇರಬೇಕು ಇಲ್ಲಿ,
ನಿಮಗೇನು ಆರಾಮ....."
ನಾನು ನಕ್ಕು ಹೊರಡುತಿದ್ದೆ.

ಮನೆಯನ್ನು ನಿಭಾಯಿಸಿದಳು
ಮಕ್ಕಳನ್ನು ಬೆಳೆಸಿದಳು
ನನ್ನನ್ನೂ ಸಹಿಸಿದಳು

ಆದರೂ ನಾನು ಜೊತೆಗಿರಲಾಗಲೇ ಇಲ್ಲ
ಪ್ರತಿ ಕ್ಷಣ ; ಅವಳು ಬಯಸಿದಂತೆ.
"ನಾನೊಬ್ಬಳೇ ಇರಬೇಕು ಇಲ್ಲಿ..."
ಸದಾ ನನ್ನ ಕಿವಿಯಲ್ಲಿ ಅವಳ ಮಾತು.

ಕಾಲ ಸರಿದು ಈಗ
ವೇಷ ಕಳಚುವ ಕ್ಷಣ...
ಅವಳದು ಮತ್ತದೇ ಆರೋಪ,
"ನನ್ನನ್ನು ಬಿಟ್ಟು ಹೋಗ್ತಿದ್ದೀರಿ;
ನಾನೊಬ್ಬಳೇ ಇರಬೇಕು ಇಲ್ಲಿ
ನಿಮಗೇನು ಆರಾಮ...."

ಅಂದಿಗೂ ಇಂದಿಗೂ
ಅವಳಿಗೆ ಉತ್ತರಿಸಲಾಗಲೇ ಇಲ್ಲ;
ಈ ಬೇಸರದಾಚೆ ಅವಳು
ಬೆಳೆಯಲೇ ಇಲ್ಲ.

No comments:

Post a Comment