Sunday, 25 December 2016

ಗೆಜ್ಜೆನಾದವಿರದೆ
ಗೋಕುಲದಲಿ ನಗುವಿಲ್ಲ|
ಕೊಳಲ ದನಿಯಿರದೆ
ಬೃಂದಾವನದಲಿ ಒಲವಿಲ್ಲ||

ನೊರೆಹಾಲ ನೋಡಲು
ಶ್ಯಾಮ ನೆನಪಾಗುತಿರೆ|
ಕಡೆಗೋಲು ತಾಕಲು
ಕನ್ನಯ್ಯನಾಟ ಕಾಡುತಿರೆ ||
ಬಿಕ್ಕುವಳು ಯಶೋಧೆ ಶೋಕದಲಿ ;
ಕಂದನಿಗಾಗಿ ಹಗಲಿರುಳು.

ನಂಬಲಿಲ್ಲ ರಾಧೆ ಇನ್ನೂ
ಕೃಷ್ಣನಿಲ್ಲವೆಂದು |
ಕಾಯುತಿಹಳು ನಿತ್ಯ ಅವಳು
ಯಮುನೆ ಹರಿವುದೆಂದು ||
ಕನಲುವಳು ರಾಧೆ ವಿರಹದಲಿ ;
ನಲ್ಲನಿಗಾಗಿ ಅನುದಿನವು.

Thursday, 15 December 2016

ಅವಳನ್ನು ಬಿಟ್ಟು ಒಬ್ಬನೇ
ಹೊರಟು ನಿಂತಾಗಲೆಲ್ಲಾ ಕೋಪಿಸಿಕೊಂಡಳು;
"ನಾನೊಬ್ಬಳೇ ಇರಬೇಕು ಇಲ್ಲಿ,
ನಿಮಗೇನು ಆರಾಮ....."
ನಾನು ನಕ್ಕು ಹೊರಡುತಿದ್ದೆ.

ಮನೆಯನ್ನು ನಿಭಾಯಿಸಿದಳು
ಮಕ್ಕಳನ್ನು ಬೆಳೆಸಿದಳು
ನನ್ನನ್ನೂ ಸಹಿಸಿದಳು

ಆದರೂ ನಾನು ಜೊತೆಗಿರಲಾಗಲೇ ಇಲ್ಲ
ಪ್ರತಿ ಕ್ಷಣ ; ಅವಳು ಬಯಸಿದಂತೆ.
"ನಾನೊಬ್ಬಳೇ ಇರಬೇಕು ಇಲ್ಲಿ..."
ಸದಾ ನನ್ನ ಕಿವಿಯಲ್ಲಿ ಅವಳ ಮಾತು.

ಕಾಲ ಸರಿದು ಈಗ
ವೇಷ ಕಳಚುವ ಕ್ಷಣ...
ಅವಳದು ಮತ್ತದೇ ಆರೋಪ,
"ನನ್ನನ್ನು ಬಿಟ್ಟು ಹೋಗ್ತಿದ್ದೀರಿ;
ನಾನೊಬ್ಬಳೇ ಇರಬೇಕು ಇಲ್ಲಿ
ನಿಮಗೇನು ಆರಾಮ...."

ಅಂದಿಗೂ ಇಂದಿಗೂ
ಅವಳಿಗೆ ಉತ್ತರಿಸಲಾಗಲೇ ಇಲ್ಲ;
ಈ ಬೇಸರದಾಚೆ ಅವಳು
ಬೆಳೆಯಲೇ ಇಲ್ಲ.

Friday, 9 December 2016

ಬಿಸಿಲಿಗೆ ಮಳೆಯ ಚಿಮುಕಿಸಿದಾಗಲೆ
ಕಾಮನ ಬಿಲ್ಲು ಮೂಡುವುದು
ಏಳು ಬಣ್ಣಗಳ ಕಮಾನು ಹೊಳೆಯಲು
ಮಂಗನ ಮದುವೆ ನಡೆಯುವುದು.

ಭೂಮಿಗು ಸ್ವರ್ಗಕು ನಡುವಿನ ಸೇತುವೆ
ರಕ್ಕಸರೇರಲು ಕರಗುವುದು
ದೇವರ ಆಟದ ಜಾರುಬಂಡಿಯು
ಚಿಣ್ಣರ ಕಂಡರೆ ಕುಣಿಯುವುದು

ಬಣ್ಣದ ಏಳು ಕುದುರೆಯ ರಥವ
ಏರುತ ಬರುವ  ಚೆನ್ನಿಗನು
ಬಾನಂಗಳದಿ ರಂಗನು ಚೆಲ್ಲಿ
ಚಿತ್ರವ ಬಿಡಿಸುವ ಕುಶಲಿಗನು.
ಪ್ರೀತಿ ಚಿಮ್ಮಿದ ಹೃದಯ
ಕಲ್ಲಾಗಿ ಹೋಯಿತೇಕೆ?
ಒಟ್ಟಾಗಿ ಕಟ್ಟಿದ ಮನೆಯು
ಚೂರಾಗಿ ಸಿಡಿಯಿತೇಕೆ?

ಕಟ್ಟುವ ಬೆಳೆಸುವ ಯತ್ನದಲ್ಲಿದ್ದೆ
ಕೆಡಹುವ ಆಟದಿ ಮನಸಾಯ್ತೇ,
ನಿನಗೀ ಪರಿ ಹಟವು ಪ್ರಿಯವಾಯ್ತೆ?

ಎದೆಯ ಒಳಗೆ ಬೆಳೆಸಿದ ಕಿಚ್ಚಿಗೆ
ಸುಡುವ ಮನದ ಹಂಗಿಲ್ಲ.


ಕಾಲದ ವೇಗದ ಓಟದ ಇದಿರು
ನಮ್ಮಯ ಇರುವಿಕೆ ಸುಳ್ಳೇನಾ,
ನಿನಿನ್ಯರದೋ ಹಾದಿಯ ಕನಸೇನಾ?

ನನ್ನ ಕನಸಿನ ಹಾದಿಯ ತುಂಬ
ಹೂಗಳು ಇನ್ನೂ ಅರಳಿಲ್ಲ.


ತಲುಪದ ಕಾಗದವೆಂದರಿತೂ
ಕಳಿಸುವ ಕಾತರ ಮುಗಿದಿಲ್ಲ,
ನಿನಗೆ ಬಾಳುವ ವಿಳಾಸ ನೆನಪಿಲ್ಲ;

ಕಳೆದ ಮೇಲೆ ಆಗುವ ಎಚ್ಚರ
ಯಾರಿಗು ಏನನು ನೀಡಿಲ್ಲ.