Wednesday 5 February 2014

ಎರಕ

ಎಷ್ಟು ಸಾರಿ ಹೇಳೋದು ನಿನಗೆ?
ಸರಿಯಾಗಿ ನೋಡು , ಮತ್ತೆ ಮಾಡು;
ಮಾತು ಸರಿಯಿಲ್ಲ, ಮೌನ ಒಳಿತಲ್ಲ.
ಹೀಗೆ ಕೂರು,ಹಾಗೆ ನಡೆ,
ಅದು ರಕ್ಕಸ ನಗು
ಅದು ಹೆಣ್ಣಿಗ ಅಳು 
ನಮ್ಮ ಹಾಗೆ ಆಗೋದು ಯಾವಾಗ?

ಅವನು ಹೇಗಿದ್ದಾನೆ ನೋಡು ,
ಅವನಂತೆ ನೀನಾಗು.
ಗುಬ್ಬಚ್ಚಿಗಳ ಹಿಂಡಲ್ಲೇ
ಹೊಟ್ಟೆ ತುಂಬೀತೇ?
ಕನಸು ಕಂಡಿದ್ದು ಸಾಕು.

ತಾನೆ ತಾನಾಗಿ ಅರಳುತ್ತಿದ್ದ 'ಅವನು',
ಮತ್ತೆ ಮೊಗ್ಗಾಗಿ 'ಲೋಕ ನೋಡಿ'
ಕಲಿತಿದ್ದ, ಸುಶಿಕ್ಷಿತನಾಗಿದ್ದ.
ತನಗೆಂದೇ ಸಿದ್ದವಾದ ಮುಖವಾಡ ಧರಿಸಿ ಎಲ್ಲರೊಳಗೊಂದಾದ.
ತನ್ನ ತಪ್ಪು ತಿದ್ದಿದ, ಬೆಳೆದ
ಹೊಸ ಜೀವ, ಮತ್ತಷ್ಟು ಮುಖವಾಡಗಳು ;
ತನ್ನ ಕೈಯಿಂದ ಸಿದ್ಧಗೊಂಡ
ಧನ್ಯಭಾವ 'ಅವನಿಗೆ'.

ಬೆರೆಸಿ ಕಲಸಿ ಹದಗೊಂಡ
ಹಸಿ ಮಣ್ಣು ಲೋಕದ
ಎರಕದಲ್ಲಿ ಮಡಿಕೆಯಾಗುತಿತ್ತು.
ಸದ್ದಿಲ್ಲದೆ ಅರಳುತ್ತಾ ,ಬಾಡುತ್ತಾ ಉದುರುತ್ತಾ ಮತ್ತೆ ಮೊಗ್ಗಾಗುತಿದ್ದ
ಪಾರಿಜಾತ ಸುಖವಾಗಿ ನಗುತಿತ್ತು.

No comments:

Post a Comment