Wednesday 5 February 2014

ಹಂತ 

ನಿದ್ದೆಯಿರದ ರಾತ್ರಿಗಳಲ್ಲಿ ಕನಸುಗಳನ್ನು ಕರೆಯುತ್ತೇನೆ,
ಕತ್ತಲು ಮುಗಿದು ಬೆಳಕು ಇಣುಕುವ ಮೊದಲು
ಕಣ್ಣು ತೆರೆದೇ ಮಲಗುತ್ತೇನೆ.
ಅವಳು ಹೂವಾಗಿ ಅರಳಿದ್ದು,
ನಾನು ಮಳೆಯಾಗಿ ಇಳಿದದ್ದು,
ಕನಸಲ್ಲಿ ನೆನಪಾಗಿ ಬಯಕೆ ಚಿಗುರುವಲ್ಲಿ 
ಕಾತರದಿಂದ ಕಾಯುತ್ತೇನೆ.
ಮಣ್ಣ ಕಣ ಕಣ ಪ್ರೀತಿಯ ಮುಚ್ಚಟೆಯಲ್ಲಿ
ಹೊಸ ಬೀಜ ಗರ್ಭ ಕಟ್ಟಿ ;
ಬೆಳೆದು ಬೇಲಿ ಜಿಗಿದು,
ಕತ್ತಲು ಬೆಳೆದು ಬೆಳಕಿಗೆ ಮೈ ಒಡ್ಡುವಲ್ಲಿ
ಎಚ್ಚರವಾಗೇ ಕನಲುತ್ತೇನೆ.
ಕತ್ತಲೂ ಸಾಯುವುದು ಬಯಸುವುದಿಲ್ಲ;
ಅದಕ್ಕೆಂದೇ ಬೆಳಕಿಗೆ ದೀಪವಿಡುತ್ತೇನೆ.
ರೆಕ್ಕೆ ಬಂದ ಹಕ್ಕಿ ಗೂಡು ಕಟ್ಟಿ ,
ಹಾರಲು ಕಲಿಸಿದವರನ್ನು ಹಂಗಿಸಿ ಹಾರುವಲ್ಲಿ,
ಖುಷಿಯಿಂದ ಕೇಕೆ ಹಾಕುತ್ತೇನೆ;
ಬೇರು ಕಡಿದ ಹಾರಾಟ ಕಂಡು
ಕೈ ಬೀಸುತ್ತೇನೆ.
ಮರಳದವರನ್ನು ಕಾಯುತ್ತಾ
ಬೇರಿಗೆ ಅಂಟಿದವರನ್ನು ಕರೆದು ಕೂರಿಸುತ್ತೇನೆ,
ಕನಸಿನ ಮೂಲೆಯಲ್ಲಿ ಸುಮ್ಮನೆ ನಗುತ್ತೇನೆ.
ಚಕ್ರ ಉರುಳಾಗಿ, ಬಯಕೆ ಬೆವರಾಗಿ;
ಹೊಸ ಜೀವ ಕದಲಿದಂತೆ,
ನೋವ ಬಸುರಿನಲ್ಲಿ ಕ್ಷಣದ ನಲಿವು!.
ತಿರುಗಿ ನೋಡಲು ಹೆದರುತ್ತಾ,
ಕನಸುಗಳಲ್ಲಿ ನಾನು ಸಾಕ್ಷಿಯಾಗುತ್ತೇನೆ.


ನಗುತ್ತೇನೆ,ಅಳುತ್ತೇನೆ, ಮಾತು ಒಡೆದು
ಮೌನವಾಗಿ ಮಲಗುತ್ತೇನೆ.
ಮತ್ತೆ ಎಲ್ಲವೂ ಕನಸೆಂದು
ಫಕ್ಕನೇ ಚೀರಿ ಎಚ್ಚರಗೊಳ್ಳುತ್ತೇನೆ.

No comments:

Post a Comment