Wednesday, 5 February 2014

ಗೋರಿ ಮೇಲಿನ ಬದುಕು


ಭೂತ ಕಾಲದ ಗೋರಿಯ ಕೆದಕಿದಷ್ಟೂ
ಕನಸುಗಳು ಮಾರಾಟಕ್ಕಿವೆ.
ಎಷ್ಟು ಸಾರಿ ಕರೆದರೂ,
ಕಹಳೆ ಶ೦ಖ ಊದಿದರೂ ನಿಲ್ಲದ ಪ್ರತಿಧ್ವನಿ.
ಇದ್ದವರದ್ದೋ?;ಸತ್ತವರದ್ದೋ?.
ಚಿವುಟಿದಷ್ಟೂ ಚಿಗುರುವ,
ರಕ್ತ ಚಿಮ್ಮಿದಷ್ಟೂ ಕೊನರುವ ಜೀವನ.
ಮಾತು ಯಾರದ್ದೋ?; ಮೌನ ಯಾರದ್ದೋ?.
ಪಾಳುಬಿದ್ದ ಅರಮನೆಯ ಒಳಗೆಲ್ಲೋ,
ಅಳುವ ಕ೦ದನ ಮಾರ್ದನಿ;
ಉತ್ತರಾಧಿಕಾರಿಯ ಆಗಮನ...?,
ಕಣ್ಣ ಸನ್ನೆ ಯಾರದ್ದೋ?; ತ೦ತ್ರ ಯಾರದ್ದೋ?.
ರುಧ್ರಭೂಮಿಯಲ್ಲಿ ನಿಲ್ಲದ ರಣಕೇಕೆ.
ಹುಡುಕಿ ಹೊರಟವ ಬುದ್ಧನಾದ;
ಶಸ್ತ್ರ ತೊರೆದವ ಅಶೋಕನಾದ,
ಸೊಕ್ಕಿ ಮೆರೆದವ ರಾಜನಾಗಿದ್ದು ಮಾತ್ರ ಇತಿಹಾಸ.
ಏನು ಮೆರೆಯಿತೋ?; ಬದುಕು ಬಾಳಿತೋ?.
ಓದಲು ಸಿಕ್ಕಿದ್ದು ಬರೀ ಮುಖವಾಣಿ!.
ಗಡಿ,ಕೀರ್ತಿ,ಪೌರುಷ ಬರೀ ಭೂತಕಷ್ಟೇ,
ವರ್ತಮಾನ?, ಅದು ಬೇರೆಯೇ.
ಸಾಲು ಮರದ ಕೆಳಗೆ  ನೆರಳ ವಿಲೇವಾರಿ;
ನೆತ್ತಿ ಮೇಲೆ ಬೀಳೋ ತರಗಲೆಗಳೆಷ್ಟೋ?.
ತನ್ನವರ ನಡುವೆ ಕಳೆದು ಹೋಗೊ ಸ೦ಕಟ,
ತಿರುಗಿ ನೋಡಿದ್ದು ಸುಳ್ಳೇ?; ಬದುಕು ನಕ್ಕಿದ್ದು ಸುಳ್ಳೇ?.
ಸಾವಿರದ ಮನೆಯ ಸಾಸಿವೆ ತೀರಿದೆ,
ಅತ್ತು ಬರಿದಾದರೆ ಮತ್ತೂ ಇದೆ ಹಾಡು!.

ಸುಮ್ಮನೆ ಬಿಟ್ಟರೆ ಕಿರೀಟವೂ ವ್ಯರ್ಥ;
ಚಲಾವಣೆಯಲ್ಲಿದ್ದರೆ ಮಾತ್ರ ಹೊಸತು ಅರ್ಥ.

No comments:

Post a Comment