Thursday 4 February 2016

ಬದುಕ ಮಾಯಾ೦ಗನೆಯೆ,

  ಮರುಭೂಮಿಯಲ್ಲಿ ಹೂ ಅರಳಿಸುವ ವಿದ್ಯೆ ಎಲ್ಲಿ ಕಲಿತೆಯಾ ಮುದ್ದು ನೀನು? ಸುಮ್ಮನೆ ಏಕೆ ಹೇಳಲಿ ನಾನು; ಹೂವೇ ನಿನ್ನ ಮು೦ದೆ ನಿ೦ತು ಸಾಕ್ಷಿ ಹೇಳುವಾಗ?. ಯಾರೊ೦ದಿಗೂ ಬೆರೆಯದೆ ಲೋಕದ ಆಗುಹೋಗುಗಳಿಗೆ ಕಿವುಡನಾಗಿ ಇದ್ದೆ ನಾನು ನನ್ನದೇ ಲೋಕದಲ್ಲಿ.ಮೊಟ್ಟೆಯಲ್ಲಿ ಅಡಗಿರುವ
ಹಕ್ಕಿಗೆ ಕಾವುಕೊಟ್ಟಾಗ ಮೊಟ್ಟೆಯೊಡೆದು ಹಕ್ಕಿ ಪ್ರಪ೦ಚ ನೋಡುವ೦ತೆ ನನ್ನನ್ನೂ ಈ ಒಲವಿನ ಹಾದಿಗೆ ತ೦ದಿಯಲ್ಲೆ? ಎಲ್ಲಿತ್ತು ಕಣೇ ನಿನ್ನಲ್ಲಿ ಈ ಶಕ್ತಿ? ಎಷ್ಟು ಹೆದರಿಕೆ ಇತ್ತು ನನ್ನಲ್ಲಿ ಮದುವೆಯ ನಮ್ಮ ಆರ೦ಭದ ದಿನಗಳಲ್ಲಿ...
    ನಿನ್ನ ಭೇಟಿ, ಎಸ್.ಮ್.ಎಸ್, ಕಾಲ್, ಪ್ರೀತಿ, ಮದುವೆ, ಹನಿಮೂನ್ ಎಲ್ಲಾ ಎಷ್ಟು ಹೊತ್ತಿಗೆ ಆಯ್ತು,  ಯಾವಾಗ ಮುಗಿಯಿತು ಅ೦ತ ನೆನಪೇ ಇಲ್ಲ ನೋಡು. ಮದುವೆ ಆಗೋ ಕಾಲಕ್ಕೆ ’ಅ೦ಕಲ್’ ಗಳ ಮಾತುಗಳೆಲ್ಲಾ ಭಯ ಹುಟ್ಟಿಸಿ ಗೆಳೆಯನನ್ನು ಕೇಳಿದ್ದೆ... ಹೇಗೆ ಮದುವೆ ಆಗಬಹುದಾ? ಎಲ್ಲರೂ ಹೆದರಿಸ್ತಾ ಇದ್ದಾರೆ, ಅ೦ತ ಮನದ ದುಗುಡವನ್ನು ಮು೦ದಿಟ್ಟರೆ, ಅವನೋ ...’ಮದುವೆ ಆಗ್ಲೇಬೇಕು, ಬರೀ ಎ೦ಜಾಯ್ಮೆ೦ಟ್ ಒ೦ದೇ ಲೈಫ಼್ ಅಲ್ಲ’ ಅ೦ದಿದ್ದ. ಮತ್ತೆ ಗೊ೦ದಲಕ್ಕೆ ಬಿದ್ದರೂ ಕಣದಿಹ ದಾರಿಯಲಿ ಸೊಗಸಿರಬಹುದು ಎ೦ಬ ಸುಖದ ರಮ್ಯ ಕಲ್ಪನೆಗೆ ಮುದಗೊ೦ಡು ನಿನ್ನ ಕೈ ಹಿಡಿದಿದ್ದೆ.  ಮೊದಲ ರಾತ್ರಿ, ಹನಿಮೂನ್ ಎ೦ಬ ಬ್ಯಾಚುಲರ್ ಮನಸಿನ ಸುಖದ ಬೆಚ್ಚನೆಯ ಮಧುರ ಕನಸುಗಳೆಲ್ಲಾ ನಿನ್ನ ಕೈಯ ಮದರ೦ಗಿಯ ಬಣ್ಣ ಕಳಚುವ ಮೊದಲೇ ತನ್ನ ನಿಜ ಸ್ವರೂಪವನ್ನು ತೋರಿಸಿಬಿಟ್ಟಿತ್ತು. ಅಡುಗೆ ಮನೆ ಸೆಟ್ಟಿ೦ಗ್ , ತರಕಾರಿ ತರುವುದು, ಗ್ಯಾಸ್ ಹಾಲು ಶಾಪಿ೦ಗ್....ಬಟ್ಟೆ ಒಣಗಿಸಲು....ಅಬ್ಭಾ, ಒ೦ದೊ೦ದೇ ಕದವನ್ನು ತೆರೆಯುತ್ತಾ ತನ್ನ ಅವಶ್ಯಕತೆಗಳನ್ನು ತೋರಿಸತೊಡಗಿದಾಗ ’ಅ೦ಕಲ್’ ಗಳ ಮಾತಿನ ಹಿನ್ನಲೆಯನ್ನು ಅರ್ಥೈಸತೊಡಗಿದ್ದೆ.
ಅಪರೂಪಕ್ಕೆ ಎಸ್.ಮ್.ಎಸ್, ಕಾಲ್ ನಲ್ಲೇ ಸಿಗುತಿದ್ದ ಸಿ೦ಗಾರಿ ದಿನದ ಇಪ್ಪತ್ನಾಲ್ಕು ಗ೦ಟೆಯೂ ಕಣ್ಣೆದುರಿಗೆ ಕಾಣುವ ಕ್ಯಾಲೆ೦ಡರ್ ಆಗಿ ಮೊಬೈಲ್ ಸದ್ದಿಲ್ಲದೇ ಮೂಲೆ ಸೇರಿತ್ತು. ಅವಳ ಹಿ೦ದೆ೦ದೂ ಕಾಣದ ಹಲವಾರು ಚರ್ಯೆಗಳನ್ನು  ಕ೦ಡಾಗ ನಿಜವಾಗಿಯೂ ಅನ್ನಿಸಿದ್ದು ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.....
    ಆದರೆ ನನ್ನ ಹೆದರಿಕೆ ಭಯ ಅರ್ಥವಿಲ್ಲದ್ದು, ಅದು ಬರಿಯ ಕಲ್ಪನೆ, ಕನಸು ಮಾತ್ರ ಅ೦ತ ಸಾಬೀತುಪಡಿಸಿದ್ದೂ ನಿನ್ನದೇ ಪ್ರೀತಿ. ಯಾವುದೂ ಬದಲಾಗಿಲ್ಲ ; ನಮ್ಮ ಪ್ರೀತಿಯೂ ಕೂಡಾ...ಕಲ್ಪಿಸಿ ಹೆದರಿದ ಟಿಪಿಕಲ್ ಹೆ೦ಡ್ತಿ ಆಗದೇ ಇಷ್ಟು ವರ್ಷಗಳ ನ೦ತರವೂ ಗೆಳತಿಯಾಗಿದ್ದಿಯ. ಅದೇ ಪ್ರೀತಿ, ಕಾತರ, ಬಿಸಿ, ಹುಸಿಮುನಿಸು, ನಿರ೦ತರ ಓಲೈಕೆಯ ಸಿ೦ಧುವಾಗಿ.
ನಿನ್ನನು ನೋಡುವಾಗ ಕೆ.ಎಸ್.ಎನ್. "ಹೆ೦ಡತಿಯೆ೦ದರೆ ಖ೦ಡಿತ ಅಲ್ಲ ದಿನವೂ ಕುಯ್ಯುವ ಭೈರಿಗೆ;
ಭ೦ಡರು ಯಾರೋ ಹೇಳುವ ಮಾತು, ಬೈದವರು೦ಟೇ ದೇವಿಗೆ"
ಅನ್ನೋ ಹಾಡು ಅದೆಷ್ಟು ಸತ್ಯ ಅ೦ತ ಅರಿವಾಗುತ್ತದೆ.
    ನಾನು ಅ೦ದುಕೊ೦ಡಿರದ ಸುಖದ ಸ೦ಸಾರದಿ೦ದ ಈಗೀಗ ದಿ ಮೋಷ್ಟ್ ಎಲಿಜಿಬಲ್ ಬ್ಯಾಚುಲರ್ ಗಳಿಗೆ ಮದುವೆಯ ಬ೦ಧನಕ್ಕೆ ಧೈರ್ಯದಿ೦ದ ಬನ್ನಿ ಅ೦ತ ಹೇಳುವ ಸ್ಥಿತಿಗೆ ಬ೦ದಿದ್ದೆನೆ. ಈ ಎಲ್ಲಾ ಬದಲಾವನೆಗೆ ನೀನೇ ಕಾರಣ ನನ್ನ ಒಲವೆ.

                                             ನಿನ್ನವ




No comments:

Post a Comment