Friday 2 March 2012

ಬೆರೆಯಲಾರದೆ

ಕಾಯುತ್ತಾ ಕುಳಿತಿದ್ದೇನೆ
ಯಾರ ಬರುವಿಕೆಗೋ ನನಗೂ ಗೊತ್ತಿಲ್ಲ,
ಯಾರ ನೆನಪೂ ನನ್ನ ಜೊತೆಗಿಲ್ಲ.
ದೂರ ಕ್ಷಿತಿಜದತ್ತಲೇ ತೀಕ್ಷ್ಣವಾದ ನೋಟ;
ಬದುಕಿನ  ಸಂಕೀರ್ಣತೆಯನ್ನೇ ಭೇದಿಸುವಂತೆ 
ಬೀಸಿದ ತಂಗಾಳಿಗೆ ಮೈ  ಒಡ್ಡಿದ್ದೇನೆ,
ಅಸ್ಟು ಮಾತ್ರ ಅದರೊಂದಿಗೆ ಬೆರೆತಿದ್ದೇನೆ.
ಹಾರಿ ಬಂದ ಚಿಟ್ಟೆ ಕೆನ್ನೆ ಸವರಿ
ಹೋದದ್ದು ಕೂಡಾ ಅಸ್ಪಸ್ಟ ನೆನಪು,
ಅದು ಅಂತಹ ಮುಖ್ಯವಾದದೂ ಅಲ್ಲ.
ನನ್ನ ಕಾಯುವಿಕೆ ಅದಕ್ಕಾಗಿ ಅಲ್ಲ; ಬಹುಶಃ.
ಯಾವುದೋ ಯಶಸ್ಸಿನ ಬೆನ್ನೇರಿ
ಅತ್ರಪ್ತವಾಗಿ ಅಲೆದಿದ್ದೇನೆ,ಮತ್ತೆ
ನನ್ನ ನಾನೇ ಶಪಿಸಿಕೊಂಡಿದ್ದೇನೆ.  
ಬದುಕಿಡೀ ಬೇರೊಬ್ಬರ ನಾಟಕದ ಪಾತ್ರಧಾರಿಯಾಗಿದ್ದೆ;
ಅದಕ್ಕಾಗಿ ನನ್ನಲ್ಲ್ಲಿ ದೂರುಗಳಿಲ್ಲ, ಖಂಡಿತಾ.
ನನ್ನದೇ ದಾರಿ ನಿರ್ಮಿಸಲು ಕೂಡಾ
ಹಪಹಪಿಸಿದ ಇತಿಹಾಸವಿಲ್ಲ ಬದುಕಲ್ಲಿ.
ಒಂದೇ ಕಡೆ ನಿಲ್ಲಲೂ ಕಾರಣಗಳಿರಲಿಲ್ಲ;
ಯಾವ ತಾಯಿ ಬೇರೂ ಕಟ್ಟಿ ಹಾಕಲಿಲ್ಲ,
ಹಾಗಂತ ಸ್ವೇಚ್ಚಾಚಾರದ ಹಾರಾಟವಿಲ್ಲ.
ಮಣ್ಣಿನೊಂದಿಗೂ,ಗಾಳಿಯೊಂದಿಗೂ
ಬೆರೆಯಲಾಗಲಿಲ್ಲ,ಕೊನೆಗೆ ದೂರವಾಗಲೂ
ನನ್ನಿಂದಾಗಲಿಲ್ಲ.
ಆದರೂ ಯಾವೂದೋ ಗಮ್ಯದ ಕಾತರ.
ಜತೆ ಸಾಗೋ ಪಯಣಿಗ ಇನ್ನು ಬಂದಿಲ್ಲ;
ಕಾಯುವಿಕೆ ಮಾತ್ರ ನಿಂತಿಲ್ಲ.






No comments:

Post a Comment