Sunday, 3 December 2017

ಜೊತೆಗಿದ್ದೂ
ಒಳಗಿಳಿಯಲಾಗದ ನೀನು;
ಒಳಗಿದ್ದೂ
ಜೊತೆಯಾಗದ ಮೀನು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ನಿನ್ನಂತೆಯೇ ನಾನೂ ಕೆಲಸದಲ್ಲಿ
ತೊಡಗಿದೆ ಅವಿರತ;
ಎರಡು ದಿನಕ್ಕಿಂತ ಮುಂದೆ ಸಾಗಲಿಲ್ಲ
ಕಾಯಕದ ರಥ.

ನಿನ್ನಂತೆಯೇ ನಾನೂ ಯೋಚಿಸಿದೆ
ದೇಶಕ್ಕಾಗಿ ಕ್ಷಣಕ್ಷಣ;
ಕೀರ್ತಿಶನಿ ಲಾಲಸೆಯ ಕಾಂಚಾಣ
ಕುಣಿಸಿತು ಝಣಝಣ.

ಸಂಸಾರದ ಜೋಡಿ ಕಣ್ಣುಗಳ ಆಸೆಯ
ಬಲೆಯಲ್ಲೇ ನಾನು ಸೀಮಿತ;
ಸಾಗರದ ಕೋಟಿ ಕಣ್ಣುಗಳ ನಿರೀಕ್ಷೆಯ
ಭಾರದಲ್ಲೂ ನೀನು ಮಂದಸ್ಮಿತ.

ಹೆಜ್ಹೆಗಳ ಆರಂಭವಷ್ಟೇ;
ಏರಲಿದೆ ಬೆಟ್ಟದಷ್ಟು.

ದೇವರ ಆಶೀರ್ವಾದ ನಿಮಗಿರಲಿ
ನನ್ನ ನೆಚ್ಚಿನ ಪ್ರಾಧಾನಿಗೆ
ಹುಟ್ಟು ಹಬ್ಬದ ಶುಭಾಶಯಗಳು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಬಯಲಿನ ಮನೆಯ
ಕದವನು ತೆರೆಯದೆ
ಬೆಳಕಿನ ಅರಿವು ಕಾಣಿಸದು
ಒಳಗಿನ ಬೀದಿಯ
ಕಸವನು ಮರೆತರೆ
ನಿರ್ಮಲ ಶಾಂತಿ ಎಲ್ಲಿಯದು?

ಮನಸಿನ ಕುದುರೆಗೆ
ಲಗಾಮು ಬಿಗಿಯದೆ
ಸೇರುವ ದಾರಿಯು ಗುರಿಯಲ್ಲ
ತುಮುಲದ ತೆರೆಯನು
ಸರಿಸದೆ ನದಿಯಲಿ
ಮಾಡಿದ ಸ್ನಾನವು ಶುಚಿಯಲ್ಲ

ಬಯಕೆಯ ಮೀನಿಗೆ
ಕಾದಿಹ ಬಕಕೂ
ಧ್ಯಾನದ ಸ್ಥಿತಿಯ ಹಂಗಿಲ್ಲ
ಫಲವನು ಬಯಸದೆ
ಮಾಡುವ ಕರ್ಮಕೆ
ಸಿದ್ಧಿಯು ಎಂದಿಗು ತಪ್ಪಿಲ್ಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಒಲವಿನ ನೋಟದ ಮಳೆಗೆ
ಒದ್ದೆಯಾಗಿದೆ ಎದೆನೆಲ
ಬಯಕೆಯ ಬೆಳಕಿನ ಕರೆಗೆ
ಮೊಗ್ಗು ಬಿರಿದೆದೆ ಹೂದಳ

ಕದಪಿನ ರಂಗಿನ ಕವಿತೆ
ಕಾಡಿ ಕಾಮನೆ ಚಂಚಲ
ಒನಪಿನ ಐಸಿರಿ ಲಲಿತೆ
ಮೋಡಿ ಮೈಮನ ನಿಶ್ಚಲ

ಮಾದಕ ಇಂಪಿನ ಕುಕಿಲ
ಹಿಗ್ಗಿ ಚಿಗುರಿದೆ ಮಾಮರ
ಮೋಹಕ ಕಂಪಿನ ಬಕುಲ
ಸುಗ್ಗಿ ಬೀಸಿದೆ ಚಾಮರ

ಕಾದಿಹೆ ಚೆಲುವೆಯ ಸೆರೆಗೆ
ಹಿಡಿದು ಕನಸಿನ ಪಂಜರ
ಬಾರೆಯ ಒಲುಮೆಯ ಮನೆಗೆ
ಹೆಣೆದು ಬದುಕಿನ ಹಂದರ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ನವರಾತ್ರಿಗಳು ಭಕ್ತಿಯ ಆರಾಧನೆಯಲ್ಲಿ ಕಳೆದು ಹೋದದ್ದೇ ಗೊತ್ತಾಗಲಿಲ್ಲ. ನಿನ್ನೆ ವಿಜಯದಶಮಿ.ಮೈಸೂರಿನಲ್ಲಿ ನಾಡ ಹಬ್ಬ ದಸರಾದ ವಿಶ್ವವಿಖ್ಯಾತ ಜಂಬೂ ಸವಾರಿಯ ಮೆರವಣಿಗೆಯ ದಿನ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂಬುದು ನನ್ನ ಬಹುದಿನಗಳ ಕನಸು.ಅದು ಈ ಸಾರಿಯೂ ಈಡೇರಲಿಲ್ಲ ಬಿಡಿ.ಆದರೆ ಈ ನಮ್ಮ ಮಂಗಳೂರು ದಸರಾ ಮೆರವಣಿಗೆ ಕೂಡಾ ಶ್ರೀಮಂತಿಕೆಯಲ್ಲಿ, ಅದ್ಧೂರಿಯಲ್ಲಿ ಏನೂ ಕಮ್ಮಿಯಿಲ್ಲ. ಕೆ.ಪಿ.ಟಿ.ಯಲ್ಲಿ ಡಿಪ್ಲೋಮಾ ಕಲಿಯುವ ದಿನಗಳಲ್ಲಿ ರಾತ್ರಿಯಿಡೀ ಸುತ್ತಾಡಿ ಕೊನೆಗೆ ಲಾಲ್ ಭಾಗ್ ನ ರಸ್ತೆಗಳಲ್ಲಿ ನಿಂತುಕೊಂಡು ಮೆರವಣಿಗೆ ನೋಡಿದ ದಿನಗಳು ಇನ್ನೂ ಹಚ್ಚ ಹಸುರಾಗಿವೆ.

ಕಳೆದ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ ಈ ಮೆರವಣಿಗೆ ತಯಾರಿಯ ಉತ್ಸಾಹಕ್ಕೇನೂ ಭಂಗ ಬಂದಿರಲಿಲ್ಲ. ನಿನ್ನೆ ಮಂಗಳೂರಿನ ಯಾವ ಭಾಗದಲ್ಲಿ‌ ನಡೆದುಕೊಂಡು ಹೋದರೂ ಅಲ್ಲಿ ಒಂದು ಟ್ಯಾಬ್ಲೋ ತಯಾರಿ ನಡೆಯುತ್ತಿರುವ ದೃಶ್ಯ ನಮ್ಮ ಕಣ್ಣಿಗೆ ಬೀಳದೇ ಇರದು. ಈ ಎಲ್ಲಾ ಸಂಭ್ರವವನ್ನೂ ಕಣ್ತುಂಬಿಕೊಳ್ಳಬೇಕೆಂದು ಮಂಗಳೂರಿಗೆ ಹೊರಟ ನನಗೆ ಈ ಎಲ್ಲಾ ಟ್ಯಾಬ್ಲೋ ತಯಾರಿಯ ದೃಶ್ಯಗಳನ್ನು ನೋಡುವ ಅವಕಾಶವೂ ಸಿಕ್ಕಿತು. ಗಣೇಶೋತ್ಸವದ ಮೆರವಣಿಗೆಗೆಂದು ಪರ್ಕಳದಲ್ಲಿ ನಮ್ಮ ಮಂಗಳ ಕಲಾ ಸಾಹಿತ್ಯ ವೇದಿಕೆಯಿಂದ ನಾವು ತಯಾರಿಸುತಿದ್ದ ಟ್ಯಾಬ್ಲೋನ ದಿನಗಳು ಫಕ್ಕನೇ ಕಣ್ಣೆದುರು ಬಂದವು. ಪ್ರತೀ ವರ್ಷ ಏನಾದರೂ ಹೊಸದನ್ನು ಕೊಡಬೇಕೆನ್ನುವ ತುಡಿತ, ರಾತ್ರಿ ಹಗಲೆನ್ನದೇ ಎರಡು ದಿನಗಳ‌ ಕೆಲಸ, ಎಲ್ಲಾ ಮುಗಿದ ನಂತರ ಅದರ ಮೇಲೆ ವೇಷ ಹಾಕಿ ಕುಳಿತುಕೊಳ್ಳುವ ಆತುರ...ಎಲ್ಲವೂ ನನ್ನ ಕಣ್ಣೆದುರು ಬಂದು ಆ ಟ್ಯಾಬ್ಲೋ ತಯಾರಿಯನ್ನು ಕುತೂಹಲದಿಂದ ನೋಡುವಂತೆ ಮಾಡಿತ್ತು.ಮೆರವಣಿಗೆ ಸಾಗುವ ಮುಖ್ಯ ರಸ್ತೆ ಅಂತೂ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ವಿದ್ಯುತ್ ಅಲಂಕಾರಿಕ ದೀಪಗಳಿಂದ ಝಗಮಗಿಸುತಿದ್ದ ರಸ್ತೆಯ ಇಕ್ಕೆಲಗಳಲ್ಲಿ ದೊಡ್ದ ದೊಡ್ಡ ಶುಭಕೋರುವ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುತಿದ್ದವು.ಮಧ್ಯಾನ್ಹ ನಾಲ್ಕು ಗಂಟೆಗೇ ಮುಖ್ಯ ರಸ್ತೆಯ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಹೊರಬರಲು ಅರ್ಧ ಗಂಟೆಯೇ ಹಿಡಿದಿತ್ತು.

ತಮಟೆಯ ಲಯಬದ್ಧ ಬಡಿತದಲ್ಲಿ ಕುಣಿಯುವ ಹುಲಿಗಳ ದೊಡ್ಡ ತಂಡವೇ ಇತ್ತು. ಲಕ್ಷದ ಮೇಲೆ ಬಹುಮಾನವಿದ್ದ ಹುಲಿವೇಷ ಸ್ಪರ್ಧೆಯಲ್ಲಿ ಭಾಗವಹಿಸಲು ಅಲ್ಲಲ್ಲಿ ತಾಲೀಮು ನಡೆಯುತಿತ್ತು. ದಸರಾದಲ್ಲಿ ಹುಲಿವೇಷ ಪ್ರಧಾನ ಆಕರ್ಷಣೆ.ಮೈಯಿಡೀ ಬಣ್ಣದ ಕುಸುರಿಯಲ್ಲಿ ಅರಳುವ ಹುಲಿಗಾಗಿ ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತೋರಿಸುವ ಆಸಕ್ತಿ ನನಗೆ ಅಚ್ಚರಿಯನ್ನುಂಟು ಮಾಡುತ್ತದೆ.ಎಷ್ಟು ಮಳೆ ಬಂದರೂ ಎಲ್ಲಾ ಋತುಗಳಲ್ಲೂ ಬೆವರಿ ಚಂಡಿ ಮುದ್ದೆಯಾಗುವ ಮಂಗಳೂರಿನಲ್ಲಿ ದಿನವಿಡೀ ಮೈಯೆಲ್ಲಾ ಬಣ್ಣದೊಂದಿಗೆ ಕುಣಿದು ಕುಪ್ಪಳಿಸುವ ಹುಲಿಗಳನ್ನು ಕಂಡರೆ ನನಗೆ ಮೊದಲಿನಿಂದಲೂ ವಿಶೇಷ ಅಕ್ಕರೆ. ಎಲ್ಲಾ ಕಡೆಯ ಹುಲಿ ತಂಡದ ಕುಣಿತವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗುತಿದ್ದೆ. ಅಚಾನಕ್ ಆಗಿ ಒಂದು ಸಣ್ಣ ಹುಲಿ ನನ್ನ ಕಣ್ಣನ್ನು ಸೆಳೆಯಿತು. ಕಾಡು ಬಿಟ್ಟು ನಾಡಿಗೆ ಹೊಸದಾಗಿ ಬಂದ ಹುಲಿಯಂತೆ ಭಯಭೀತವಾಗಿ ಗುಂಪಿನಿಂದ ಪ್ರತ್ಯೇಕಗೊಂಡು ಏಕಾಂಗಿಯಾಗಿ ಅಲೆಯುತಿತ್ತು.
ದೊಡ್ಡ ತಂಡಗಳ ಕುಣಿತದಿಂದ ನೋಟವನ್ನು ಬಲವಂತದಿಂದ ಹೊರಳಿಸಿ ಈ ಸಣ್ಣ ಹುಲಿಯನ್ನು ಬೆನ್ನಟ್ಟಿಕೊಂಡು ಹೋದೆ.ಅದೂ ನಿರಾಯುಧನಾಗಿ! ನನ್ನ ಧೈರ್ಯವನ್ನು ನೀವು ಮೆಚ್ಚಲೇ ಬೇಕು. ಯಾವುದೇ ತಮಟೆ ಬಡಿತದ ಪಕ್ಕ ವಾದ್ಯಗಳ ಸದ್ದಿಲ್ಲದೇ ಅದು ಕುಣಿಯುತಿತ್ತು ಅಂಗಡಿಗಳ ಗಲ್ಲಾ ಪೆಟ್ಟಿಗೆಯ ಎದುರು.ನವರಾತ್ರಿಯ ಸಮಯದಲ್ಲಿ ಬೇರೆ ಬೇರೆ ರೀತಿಯ ವೇಷಗಳನ್ನು ಹಾಕಿಕೊಂಡು ಮನೆ, ಅಂಗಡಿಗಳಲ್ಲಿ ಪ್ರದರ್ಶನವನ್ನು ಕೊಟ್ಟು ಹಣ ಸಂಪಾದಿಸುವುದು ಹೊಸ ವಿಚಾರವೇನಲ್ಲ. ಆದರೆ ಈ ಹುಲಿಯನ್ನು ಬೆನ್ನಟ್ಟಲು ನನಗಿದ್ದ ಮುಖ್ಯ ಕುತೂಹಲ ಅದು ಪ್ರತೀ ಅಂಗಡಿಗೆ ಹೋದ ನಂತರ ಒಂದು ಮೂಲೆಯಲ್ಲಿ ಸಣ್ಣ ಮಗುವನ್ನು ಹಿಡಿದುಕೊಂಡು ಕುಳಿತಿದ್ದ ಒಂದು ಹೆಂಗಸಿನ ಬಳಿ ಓಡಿ ಹೋಗುತಿತ್ತು.ಮತ್ತೆ ಸ್ವಲ್ಪ ಸಮಯದ ನಂತರ ಮತ್ತೊಂದು ಅಂಗಡಿಯ ಮುಂದೆ ನಿಲ್ಲುತಿತ್ತು. ಆ ಹುಲಿಯ ಕಣ್ಣುಗಳು ಬೇರೆ ಹುಲಿಗಳ ಕಣ್ಣುಗಳಂತೆ ಹೆದರಿಕೆಯನ್ನು ಹುಟ್ಟಿಸುತ್ತಿರಲಿಲ್ಲ.ಬದಲಾಗಿ ಅವುಗಳೇ ಹೆದರಿದ್ದವು. ಬೆದರಿದ ಹರಿಣಿಯ ಕಣ್ಣುಗಳಂತೆ ಈ ಹುಲಿಯ ಕಣ್ಣುಗಳು. ಎರಡು ಮೂರು ಅಂಗಡಿಗೆ ಹೋಗಿ ವಾಪಾಸು ಬರುವಾಗ ಆ ಸಣ್ಣ ಹುಲಿಯನ್ನು ಹಿಡಿದುಬಿಟ್ಟೆ! ಒಂದು ಕ್ಷಣ ಹುಲಿ ಹಿಡಿದ ವೀರನ ಗತ್ತು ಗಾಂಭೀರ್ಯ ನನ್ನೊಳಗೆ ಹರಿಯಿತು.ಬೆದರಿ ಬೆವೆತು ನನ್ನ ಹಿಡಿತದಿಂದ ಪಾರಾಗಲು ಒದ್ದಾಡುತಿತ್ತು.

ರಸ್ತೆಯ ಪಕ್ಕದಲ್ಲಿ ನಿಂತಿದ್ದ ಐಸ್ಕ್ರೀಮ್ ಗಾಡಿಯಿಂದ ಎರಡು ಚೋಕೊಬಾರ್ ನ್ನು ತಂದು ಎರಡನ್ನೂ ಅವನ ಕೈಗಿತ್ತೆ. ಎಷ್ಟೋ ದಿನಗಳಿಂದ ಬೇಟೆ ಸಿಗದೇ ಒದ್ದಾಡುತಿದ್ದ ಹುಲಿಯ ಎದುರು  ಕೊಬ್ಬಿದ ಜಿಂಕೆ ಕಂಡಾಗ ಹಾರಿ ಹಿಡಿದು ಗಬಗಬನೆ ತಿನ್ನುವಂತೆ ಎರಡೂ ಐಸ್ಕ್ರೀಮ್ ಗಳನ್ನೂ ತಿಂದಿತು ಈ ಪುಟಾಣಿ ಹುಲಿ.‌ ಹೊಟ್ಟೆ ಸ್ವಲ್ಪ ತಣ್ಣಗಾಗಿರಬೇಕು.ಹೆದರಿದ ಕಣ್ಣಿಗಳಿಂದ ನಿರಾಳತೆಯ ಭಾವ ಹೊರಹೊಮ್ಮಿತು. ಮತ್ತು ನಾನು ಒತ್ತಾಯ ಮಾಡಿ ಕೇಳಿದ್ದಕ್ಕೆ ತನ್ನ ಕತೆಯನ್ನು ನನ್ನ ಮುಂದೆ ಬಿಚ್ಚಿಟ್ಟಿತು.ಮೂಲೆಯಲ್ಲಿ ಕೂತ ಎರಡು ಮಕ್ಕಳ ತನ್ನ ತಾಯಿಗೆ ಬಿಕ್ಷಾಟನೆಯೇ ಪ್ರಮುಖ ಉದ್ಯೋಗ.ಈಗ ಆ ಸಣ್ಣ ಮಗುವಿನೊಂದಿಗೆ ಅವಳಿಗೆ ಹೆಚ್ಚು ಕಡೆ ಹೋಗಲಾಗದೇ ಕುಳಿತಲ್ಲೇ ಬಟ್ಟೆ ಹರಡಿ ಭಿಕ್ಷೆ ಕೇಳುತ್ತಾಳೆ. ತನ್ನನ್ನು ಯಾವುದೋ ಹುಲಿ ತಂಡದವರಿಗೆ ದಮ್ಮಯ್ಯ ಹಾಕಿ ಈ ಹುಲಿವೇಷವನ್ನು ಹಾಕಿಸಿದ್ದಾಳೆ.ಮತ್ತು ಅಂಗಡಿ ಅಂಗಡಿಗೆ ಕಳಿಸುತ್ತಾಳೆ.ಬೆಳಿಗ್ಗೆಯಿಂದ ಹೀಗೆ ಹೋಗಿ‌ ಹೋಗಿ ಸಣ್ಣ ಹುಲಿಯ ಪುಟ್ಟ ಪಾದಗಳು ದಣಿದಿವೆ.ನನಗಾಗಲ್ಲಮ್ಮಾ ಇನ್ನು... ಸಾಕು ಅಂತ ಎಷ್ಟು ಗೋಗರೆದರೂ ತಾಯಿ ಕೇಳುತ್ತಿಲ್ಲ. ಮಗುವಿಗೇನು ಗೊತ್ತು? ಇಂದು ವಿಜಯದಶಮಿ! ಕೆಡುಕಿನ ಮೇಲೆ ಒಳಿತಿನ ವಿಜಯದ ದಿನ. ಇವತ್ತು ದುಡಿದರೆ ವಾರವಿಡೀ ಸುಖವಾಗಿರಬಹುದು. ನಾನೂ ಹೊಟ್ಟೆತುಂಬಾ ಉಣ್ಣಬಹುದು.ತನ್ನಲ್ಲಿ ಸ್ವಲ್ಪವಾದರೂ ಹಾಲು ಉಕ್ಕಿದರೆ ಸದಾ ಹಾಲಿಗಾಗಿ ಅಳುವ ಸಣ್ಣ ಮಗುವಿಗೂ ಹಾಲೂಡಿಸಬಹುದು ಅನ್ನುವ ಲೆಕ್ಕಾಚಾರದಲ್ಲಿ ಸಣ್ಣ ಹುಲಿಯನ್ನು ಮತ್ತೆ ಮತ್ತೆ ಬಲವಂತವಾಗಿ ಬೇಟೆಗೆ ತಳ್ಳುತಿದ್ದಾಳೆ. ಮನಸ್ಸಿಲ್ಲದ ಮನಸ್ಸಿನಿಂದ ಭಾರಾವಾದ ಹೆಜ್ಜೆಗಳನ್ನು ಊರಿಕೊಂಡು ಸಣ್ಣ ಹುಲಿ ಹೊರಡುತ್ತದೆ ಮತ್ತೆ ಮತ್ತೆ ಬೇಟೆಗೆ!...ಸಣ್ಣ ಹುಲಿಯ ಮಾತು ಕೇಳಿ ಮನಸ್ಸು ಭಾರವಾಯ್ತು.ತಪ್ಪಿ‌ಅವನ ಅಪ್ಪನ ಬಗ್ಗೆ ಕೇಳಿದೆ. ಆಗ ಹುಲಿಯ ಕಣ್ಣಲ್ಲಿ ಉಕ್ಕಿದ ರೋಷ ನನ್ನನ್ನು ಅಟ್ಟಾಡಿಸಿ ಕೊಂದು ತಿನ್ನುವಷ್ಟಿತ್ತು.

ಹುಲಿ ಕುಣಿತದ ತಂಡಕ್ಕೆ ಅಂತಾನೇ ಇಟ್ಟುಕೊಂಡಿದ್ದ ದುಡ್ಡನ್ನು ಸಣ್ಣ ಹುಲಿಯ ಜೋಳಿಗೆಗೆ ಹಾಕಿ, ಆ ದಿನಕ್ಕಾಗುವಷ್ಟು ತಿಂಡಿಯನ್ನೂ ಕೊಟ್ಟು ಅವನನ್ನು ಕಳಿಸಿದೆ. ಸ್ವಲ್ಪ ಹೊತ್ತು ಹಾಗೆಯೇ ಕುಳಿತಿದ್ದೆ. "ಎಲ್ಲಿದ್ದಿ ಮಾರಯಾ, ಸಿಗ್ತೇನಂತ ಹೇಳಿ ಪತ್ತೆನೇ ಇಲ್ಲ..." ಅಂತ ಮಂಜನ ಕಾಲ್ ಬಂತು. ಮನಸ್ಸು ಅರಳಿತು,ಮತ್ತೆ ಸಂಭ್ರಮದ ರಸ್ತೆಯಲ್ಲಿ ಮಂಜನ ಜೊತೆಗೆ ಹೆಜ್ಜೆ ಹಾಕಿದೆ.ದೇವಸ್ಥಾನ ಬೀದಿಯಲ್ಲೆಲ್ಲಾ ತಿರುಗಿ ನಮ್ಮ ಖಾಯಂ ಅಡ್ಡ ಪಬ್ಬಾಸ್ ಐಸ್ಕ್ರೀಮ್ ಪಾರ್ಲರ್ ಗೆ ಬಂದು ಕುಳಿತಾಗ ಮುಸ್ಸಂಜೆ ಕಳೆದು ರಾತ್ರಿ ಇಣುಕುತಿತ್ತು. ಪಬ್ಬಾಸ್ ಎದುರಿನಲ್ಲೇ ಹಾಕಿದ್ದ ದೊಡ್ಡ ವೇದಿಕೆಯಲ್ಲಿ ಆರ್ಕೆಸ್ಟ್ರಾ ತಂಡದ ಮೈಕ್ ಟೆಸ್ಟಿಂಗ್ ನಡೆಯುತಿತ್ತು. ಹೊರಗೆಲ್ಲಾ ಝಗಮಗಿಸುವ ಲೈಟಿಂಗ್ಸ್ ನಿಂದಾಗಿ ಮಾಮೂಲಿ ಹೋಗುವ ರಸ್ತೆಗಿಂದು ರಾಜಕಳೆ.ನಿಧಾನವಾಗಿ ರಸ್ತೆ ಸಂಭ್ರಮದ ಮೆರವಣಿಗೆಗೆ ಸಜ್ಜಾಗುತಿತ್ತು.ಇದೆಲ್ಲದರ ನಡುವೆಯೂ ಎದುರಿನ ಅಂಗಡಿಯ ಗಲ್ಲಾ ಪೆಟ್ಟಿಗೆಯೆದುರು ಕುಣಿದು ಮಾಲೀಕನ ಮುಖವನ್ನೇ ನೋಡುತಿದ್ದ ಸಣ್ಣ ಹುಲಿ ಕಾಣದೇ ಇರಲಿಲ್ಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ವಿಶ್ವ ಶಾಂತಿ ಹಾಗೂ ಭಾತೃತ್ವದ ಶೃಂಗ ಸಭೆ
SDM COLLEGE MANGALORE
ಕವಿಗೋಷ್ಟಿ:

೧. ಹುಚ್ಚು

ಧರ್ಮಗಳ ತಿರುಳನರಿಯದೇ
ಶ್ರೇಷ್ಠತೆಯ ವ್ಯಸನಕ್ಕಿಳಿದ ಜನ
ಗಡಿ ಗಡಿಗಳ ನಡುವೆ
ಹಚ್ಚಿದರು ಕಿಚ್ಚು;
ಯಾವುದರ ಪರಿವೇ ಇಲ್ಲದೇ
ಗಡಿಗಳ ನಡುವೆ ಹುಟ್ಟಿ
ನಗುವ ಹೂವಿಗೆ ಮಾತ್ರ
ಶಾಂತಿಯ ಹುಚ್ಚು?

೩.ಭರವಸೆ

ಕೋಟಿ ತಾರೆ ಹೊಳೆದರೂ
ಬಾನಿನಲ್ಲಿ
ಜೀವಜಾಲಕ್ಕೆ
ಸೂರ್ಯನೊಬ್ಬನೇ ಬೆಳಕು
ಮತ ಧರ್ಮಗಳೆಷ್ಟಿದ್ದರೂ
ಜಗದಲ್ಲಿ
ಶಾಂತಿ ಮಂತ್ರಕ್ಕೆ
ಮಾನವತೆಯೊಂದೇ ಮಿಣುಕು

೩. ಧ್ಯೇಯ

ಸಾಲಾಗಿ ಹಚ್ಚಿಟ್ಟ ದೀಪಗಳು
ಸೂಸುವ ಬೆಳಕೊಂದೇ
ಶಾಂತ ಶೀತಲ;
ಗುರುವಾಗಿ ಹುಟ್ಟಿದ ಧರ್ಮಗಳು
ಹೇಳುವ ಆಶಯವೂ ಒಂದೇ
ಶಾಂತಿ ಸಕಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಪಯಣಿಸುವ ವೇಳೆಯಲಿ...

ಹೆಚ್ಚು ಕಡಿಮೆ ಖಾಲಿಯೇ ಇದ್ದ ಬಸ್ಸಿನಲ್ಲಿ ಕುಳಿತು ಕಿಟಕಿಯಿಂದ ಹೊರಗೆ ನೋಡುತ್ತಿದ್ದ ನನ್ನಲ್ಲೂ ಖಾಲಿ ಖಾಲಿಯಾದ ಭಾವ.ಹೊರಗೆ ಓಡುತ್ತಿರುವ ಸರ್ವ ಸೃಷ್ಟಿಯ ನಡುವೆಯೂ ನಾನು ಸ್ತಬ್ದವಾಗಿ ಕುಳಿತಿದ್ದೆ ಥೇಟ್ ನನ್ನ ಯೋಚನೆಗಳಂತೆ.ಕಾಲದೊಂದಿಗೆ ಯಾವತ್ತೂ ಹೆಜ್ಜೆ ಹಾಕಿಯೇ ಇಲ್ಲ ನೀನು... ಅನ್ನುವ ಅಮ್ಮನ ಮಾತು ತಲೆಯಲ್ಲಿ ಯಾವತ್ತೂ ಕೊರೆಯುವ ಗುಂಗೀ ಹುಳ. ಯೋಚನೆಗಳ‌ ನಡುವೆಯೇ ನನ್ನ ಹತ್ತಿರದ ಖಾಲಿ ಸೀಟ್ ನಲ್ಲಿ ಅವಳು ಬಂದು ಕುಳಿತುಕೊಂಡದ್ದು ಅರಿವಾಗಿ ಅವಳತ್ತ ತಿರುಗಿದೆ.ಒಂದು ನಗೆಯ ವಿನಿಮಯವಾದಾಗಲೇ, ಅರೇ...ಪರಿಚಯದವಳೇ?, ಹೆಸರು ನೆನಪಾಗುತಿಲ್ವೇ...ನನ್ನನ್ನು ನೋಡಿಯೇ ಹತ್ತಿರ ಕುಳಿತಿರ್ಬೇಕು...ಅಂದುಕೊಳ್ಳುವಷ್ಟರಲ್ಲಿಯೇ, "ಹಾಯ್'' ಅಂದ್ಳು. ಈಗ ತಾನೇ ಇಣುಕುತ್ತಿರುವ ಡಿಸೆಂಬರ್ ಚಳಿಗೆ ಮುದುಡಿ ಕುಳಿತ ನನ್ನ ಮೇಲೆ ಸೂರ್ಯನ ಬೆಚ್ಚಗಿನ ಎಳೆಯ ಕಿರಣ ಬಿದ್ದಂಗಾಯ್ತು. ಸ್ವಲ್ವವೇ ಅರಳಿ ಕುಳಿತೆ... ಇಬ್ಬನಿ ಬಿದ್ದು ಮುದುಡಿದ ನಾಚಿಗೆ ಮುಳ್ಳು ಬಿಸಿಲಿಗೆ ಅರಳಿದಂತೆ.ಪೆದ್ದು ಪೆದ್ದಾಗಿ ನಕ್ಕೆ. ''ಯಾಕೆ ಶಶಿ...ನನ್ನ ಗುರ್ತ ಸಿಗ್ಲಿಲ್ಲಾ?..'' ಅಂದಾಗ ಯಾರಪ್ಪಾ ಇವಳು? ಎಲ್ಲೋ ನೋಡಿದ ಹಾಗೇ ಇದೆ, ನನ್ನ ಹೆಸ್ರು ಬೇರೆ ಕರಿತಿದ್ದಾಳೆ...ಏನ್ ಹೇಳೋದೀಗ...ಅಂತ ಚಡಪಡಿಸುತ್ತಿರುವಾಗ ನನಗೆ ಕಷ್ಟವೇ ಕೊಡದೇ, " ನಾನು ಕಣೋ, ಸ್ಮಿತಾ...ನಿನ್ನದೇ ಕಾಲೇಜ್, ಕಲಾ ವಿಭಾಗ" ಅಂದಾಗಲೂ ಎಲ್ಲಿ ನೋಡಿದ್ದು ಅಂತ ಸ್ಪಷ್ಟವಾಗದೇ ಯೋಚಿಸತೊಡಗಿದೆ.ನಾನು ಮೌನವಾದದ್ದು ನೋಡಿ ಕೊಂಚ ಹತಾಶಳಾದಂತೆ ಕಂಡ ಅವಳು " ಯಾಕೆ, ಬೇರೆ ಸೀಟ್ ಗೆ ಹೋಗ್ಬೇಕಾ?..." ಅಂದ್ಳು. "ಹೇ..ಹೇ..ಬೇಡ ಬೇಡ, ನನಗೂ ಕಂಪೆನಿ ಬೇಕು" ಅನ್ನೋದಷ್ಟೇ ಆಯಿತು ನನ್ನಿಂದ...ಪುಣ್ಯಕ್ಕೆ ಸೀಟ್ ಬಿಟ್ಟು ಹೋಗ್ಲಿಲ್ಲ.ಆದರೆ ಇಷ್ಟು ಹೇಳಿದ ಮೇಲೂ ನನ್ನಿಂದ ಸಕಾರಾತ್ಮಕ ಸ್ಪಂದನೆ ಸಿಗದಿದ್ದದ್ದು ಬೇಸರವಾಗಿರಬೇಕು ಅವಳಿಗೆ. ಮತ್ತೆ ಮಾತಾಡದೇ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಮೊಬೈಲ್ನಲ್ಲಿ ಬ್ಯುಸಿ ಆದಳು.

ಚೆಲುವೆಯ ಸಾನಿಧ್ಯ ಆಸ್ವಾದಿಸುವುದನ್ನು ಬಿಟ್ಟು ಮತ್ತೆ‌ ಮನಸ್ಸು ಯೋಚನೆಯ ಬೀದಿಗಿಳಿಯಿತು.ಹುಡುಗಿಯರೆಂದರೆ ಮಾರು ದೂರ ಓಡುವ ನನ್ನ ಮೊಬೈಲ್ ಕಾಂಟೆಕ್ಟ್ ಲಿಸ್ಟ್ ನಲ್ಲಿ ಹುಡುಗಿಯರ ನಂಬರುಗಳೇ ಇಲ್ಲ.ಎಲ್ಲೋ ಮರೆಯಲ್ಲಿ ನಿಂತು ಹಕ್ಕಿ ವೀಕ್ಷಣೆಯ ಅಭ್ಯಾಸವಿದ್ದರೂ ಎದುರಲ್ಲಿ ನಿಂತು ಮಾತಾಡುವಾಗ ನಾನೀಗಲೂ ಉತ್ತರಕುಮಾರನೇ.ನನ್ನ ಕಾಲೇಜ್ ಫ್ರೆಂಡ್ಸ್ ಕಾಲೇಜು ಕಾರಿಡಾರ್ ನಲ್ಲಿ ಹುಡುಗಿಯರ ಜೊತೆಗೆ, ಬಸ್ ಸ್ಟ್ಯಾಂಡ್ನಲ್ಲಿ ಪಾರ್ಕ್ನಲ್ಲಿ  ತಮ್ಮ ತಮ್ಮ ಗರ್ಲ್ಸ್ ಫ್ರೆಂಡ್ಸ್ ಗಳ ಜೊತೆಯಲ್ಲಿ ಚಕ್ಕಂದವಾಡುವಾಗ ದೂರದಲ್ಲಿ ನೋಡಿ ಅಸೂಯೆಯಲ್ಲಿ ವಿಲ ವಿಲ ಒದ್ದಾಡಿದರೂ ಅವಕಾಶವಿದ್ದಾಗ ಸದುಪಯೋಗ ಮಾಡಿಕೊಳ್ಳುವ ಕಲೆಯೂ ಸಿದ್ಧಿಸಿಲ್ಲ.ಎಲ್ಲರೂ ಹೇಳುವಂತೆ ನಾನೊಬ್ಬ ರಿಜಿಡ್ ವ್ಯಕ್ತಿತ್ವದವನು.ಸುಲಭವಾಗಿ ಯಾರೊಂದಿಗೂ ಬೆರೆಯಲಾರದ ಶುಕಮುನಿ.ಎಲ್ಲಾ ಯೋಚನೆಗಳಿಂದ ಹೊರಬಂದು ಅವಳತ್ತ ನೋಡಿದರೆ ಸೀಟಿಗೊರಗಿ ಕಣ್ಣು‌ಮಚ್ಚಿದ್ದಾಳೆ. ಬಹುಶಃ ಯಾವುದೋ ಹಾಡಿನ ಗುಂಗಲ್ಲಿರಬೇಕು.ಹಳದಿ ಟೀ ಶರ್ಟ್ ನೀಲಿ ಜೀನ್ಸ್ ತೊಟ್ಟಿರುವ ಬಳುಕುವ ನೀಳ‌ ಶರೀರ.ಮುಂಗುರುಳೊಂದು ಅವಳ ಕೆನ್ನೆಯ ಮೇಲೆ ಹಿತವಾಗಿ ಲಾಸ್ಯವಾಡುತ್ತಿದೆ.ಮುಚ್ಚಿದ ರೆಪ್ಪೆಗಳಡಿಯಲ್ಲಿ ಚಂಚಲ ಕಣ್ಣುಗಳು ಕದಲಿದಂತೆ ಭಾಸವಾಗುತ್ತಿದೆ.ಮಿತವಾಗಿ ತುಟಿಗೆ ಮೆತ್ತಿದ ಗುಲಾಬಿ ರಂಗಿನಲ್ಲಿ ಆಹ್ವಾನ ಎದ್ದು ಕಾಣುತ್ತಿದೆ.ಅವಳು ನೋಡದಿದ್ದರೂ ಅವಳನ್ನು ನೋಡಲು ಭಯವಾಗಿ ಮತ್ತೆ ಕಿಟಕಿಯ ಹೊರಗೆ ಇಣುಕಿದರೂ ನೋಟದಲ್ಲಿ ತುಂಬಿಕೊಂಡ ಒಲುಮೆಯ ತುಂಬು ಪೌರ್ಣಿಮೆ! ಸಂಜೆಯ ಹಿತವಾದ ತಂಗಾಳಿ ಮೈಗೆ ಸೋಕಿ ಹುಚ್ಚು ಕಾಮನೆಗಳನ್ನು ಕೆರಳಿಸುತ್ತಿದೆ.ಹತ್ತಿರವೇ ಕುಳಿತಿದ್ದರೂ ಅದೆಷ್ಟು ದೂರ ನಮ್ಮ ನಡುವೆ. ಕಿಟಕಿ ಬಿಟ್ಟು ಅವಳೆಡೆಗೆ ಸರಿದು ಕುಳಿತೆ.ಹಿತವಾಗಿ ಮೈ ತಾಗುವಷ್ಟು ಹತ್ತಿರ.ಅವಳನ್ನು ಸೋಕಿ ಬರುತ್ತಿದ್ದ ತಂಗಾಳಿಯಿಂದ ಮನದಲ್ಲಿ ಮಲ್ಲಿಗೆ ಅರಳುತ್ತಿರುವ ಘಮ!.ಯಾವುದೋ ದಿವ್ಯ ಘಳಿಗೆಯಲ್ಲಿ ಅವಳ ಕೈಗೆ ಕೈ ಸೋಕಿದಾಗ ಮೃದುತ್ವದ ಸ್ಪರ್ಶದಲ್ಲಿ ಸಾವಿರ ದೀಪಗಳು ಒಮ್ಮೆಲೇ ಉರಿದಂತೆ ಪುಳಕಿತನಾದೆ.

ಯಾರಪ್ಪಾ ಈ ಸ್ಮಿತಾ?...ನಿಲ್ಲದ ಹುಡುಕಾಟದಲ್ಲಿ ತಲೆ  ಬಿಸಿಯೇರಿತು.ಯಾರೇ ಆಗಲಿ, ಅವಳು ಇಷ್ಟು ಆತ್ಮೀಯತೆಯಲ್ಲಿ ಮಾತಾಡುವಾಗ, ನಗುವಾಗ ನಾನು ಸುಮ್ಮನಿರಬಾರದಿತ್ತು.ಏನಂದುಕೊಂಡ್ಳೋ ನನ್ನ ಬಗ್ಗೆ....ಹತ್ತಿರವೇ ಕುಳಿತಿದ್ದಾಳೆ. ಮಾತಾಡಿಸಿಯೇ ಬಿಡುವ ಅಂತ ಗಟ್ಟಿ ನಿರ್ಧಾರ ಮಾಡಿ ಅವಳತ್ತ ತಿರುಗಿದರೆ ಅವಳಿನ್ನೂ ಮುಚ್ಚಿದ ಕಣ್ಣು ತೆರೆದಿಲ್ಲ.ಸರಿ, ಎದ್ದ ಕೂಡಲೇ ಮಾತಾಡಿಸುವ, ಯಾವ ಸ್ಮಿತಾಳೇ ಆಗಿರಲಿ...ನನ್ನ ಸ್ಮಿತಾವಾದರೆ ಅದೆಷ್ಟು ಹಿತ ಅಂತ ಯೋಚಿಸಿ ಅವಳು ಕಣ್ತೆರೆಯುವ ದಿವ್ಯ ಘಳಿಗೆಯನ್ನೇ ಕಾಯುತ್ತಾ ಕುಳಿತೆ.

ಬಸ್ಸು ಬೈಲೂರು ಸ್ಟ್ಯಾಂಡ್ ನಲ್ಲಿ ನಿಲ್ಲುತ್ತಲೇ ಸಡನ್ ಆಗಿ ಎದ್ದು ನಿಂತಳು.ಇನ್ನೇನು ಇಳಿಯಬೇಕು ಅನ್ನುವಷ್ಟರಲ್ಲಿ ಎಲ್ಲಿಲ್ಲದ ಧೈರ್ಯ ಒಗ್ಗೂಡಿಸಿ ತುಟಿಯ ಮೇಲೆ ಬಲವಂತದ ನಗು ಚೆಲ್ಲಿ "ಸ್ಮಿತಾ...." ಅಂದೆ. ಮುಂದೆ ಹೋದವಳು ಒಂದು ಕ್ಷಣ ನಿಂತು, ನಂತರ ನನ್ನ ಕಡೆಗೆ ತಿರುಗಿ ಹತ್ತಿರ ಬಂದು,
" ಕ್ಷಮಿಸಿ, ನನ್ನ ಹೆಸರು ಸ್ಮಿತಾ ಅಲ್ಲ.ಮಮತ ಅಂತ. ನನಗೆ ನಿಮ್ಮ ಪರಿಚಯವಿಲ್ಲ. ಹಿಂದಿನ ಸೀಟ್ ನಲ್ಲಿ ಎರಡು ಸ್ಟಾಪ್ ಹಿಂದೆ ಇಳಿದ ವ್ಯಕ್ತಿ ನನ್ನನ್ನು ಫಾಲೋ ಮಾಡ್ತಿದ್ದ. ಓಡಿ ಓಡಿ ಸಿಕ್ಕಿದ ಈ ಬಸ್ ಹತ್ತಿದೆ.ಅವನೂ ಹತ್ತಿದ. ಏನೂ ತೋಚದೇ ನಿಮ್ಮ ಹತ್ತಿರ ಕುಳಿತೆ.ನೀವೆಲ್ಲೋ ನೋಡ್ತಿದ್ರಿ.ನಿಮ್ಮ ಕಾಲೇಜ್ ಐಡಿಯಿಂದ ಹೆಸರು ನೋಡಿ ಮಾತಾಡಿಸಿದೆ. ಇವನ್ಯಾರೋ ಪರಿಚಯದ ಹುಡುಗ ಅಂತ ತಿಳಿದು ಅವನೂ ಇಳಿದು ಹೋದ...ಥ್ಯಾಂಕ್ಯೂ" ಅಂತ ಹೇಳಿ ಮತ್ತೆ ಹಿಂದೆ ತಿರುಗದೇ,ಒಲುಮೆಯ ಭಾಗವೇ ಬದುಕಿನಿಂದ ದೂರ ಹೋದಂತೆ ಬಸ್ಸಿನಿಂದ ಇಳಿದು ಹೋದಳು.

ಆವರಿಸಿದ ಗಾಢ ಅಂಧಕಾರದ ಶೂನ್ಯದಲ್ಲಿ ಅವಳು ಇಳಿದು ಹೋದ ದಾರಿಯನ್ನೇ ನೋಡುತ್ತಾ ಕಿಟಕಿಯಿಂದ ಹೊರಗೆ ನೋಡಿದರೆ ಸೃಷ್ಟಿಯೆಲ್ಲಾ ಓಡುತ್ತಿತ್ತು ಯಥಾ ಪ್ರಕಾರ. ಹತ್ತಿರದ ಖಾಲಿ ಸೀಟು ನನ್ನನ್ನು ಅಣಕಿಸಿದಂತೆ ಭಾಸವಾಗಿ ಕುಳಿತಲ್ಲೇ ಸ್ತಬ್ದನಾದೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು