Monday, 7 August 2017

ಒಲವ ಕಾವ್ಯ ಹೂವ ಕರೆಗೆ
ಕಾದು ಕುಳಿತ ಭ್ರಮರ ಸೆರೆಗೆ
ನಾಚಿ ನಿಂತು ಸೆಳೆದೆ
ಮನದಿ ಮಿಂಚಿ ಹೊಳೆದೆ
ಬನವೆಲ್ಲಾ ನಿನ್ನ ಪ್ರೇಮ ಶಾಲೆ
ನೀನಾದೆ ನನ್ನ ಕೊರಳ ಮಾಲೆ

ಮನದ ನೆಲಕ್ಕೆಲ್ಲ ಪನ್ನೀರು ಸುರಿದು
ಮಿಲನದೊಸಗೆ ಕಾಡಿ ಬೇಡಿದೆ
ಭಾವಸೆಳೆಯೆಲ್ಲ ನಿನಗಾಗಿ ಮಿಡಿದು
ಚೈತ್ರ ಚಿಗುರಿ ಹಕ್ಕಿ ಹಾಡಿದೆ
ಉಕ್ಕುವ ಅಲೆಯಲ್ಲು ತೀರದ ಕನವರಿಕೆ
ಬಾಳಿನ ಇರುಳಲ್ಲು ನೀನಗುವ ಚಂದ್ರಿಕೆ
ಕರಿಮುಗಿಲು ನೀನಾಗಿ ನಗಲು
ಗರಿಬಿಚ್ಚಿ ನಾ ಕುಣಿವ ನವಿಲು

ವೃಂದಾವನಕೆಲ್ಲ ತಂಗಾಳಿ ಬೀಸಿ
ಹಸಿಬಿಸಿ ಆಸೆ ಹೆಣ್ಣಾಗಿ
ಕೃಷ್ಣನ ಕೊಳಲ ನಾದವು ಕೇಳಿ
ಪಿಸುನುಡಿ ಎಲ್ಲ ಇಂಪಾಗಿ
ಬಯಕೆ ಬಿಸಿಯಲ್ಲೂ ಹೊಳೆವ ಮಳೆಬಿಲ್ಲು
ದೂರ ಇರುವಲ್ಲೂ ವಿರಹ ಬರಿಸುಳ್ಳು
ಕನಸಲ್ಲು ಕಣ್ಣಾಗಿ ಕಾದೆ
ನೀನಾದೆ ಈ ಬಾಳ ರಾಧೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಕಣ್ಣ ಸನ್ನೆಯು ಕಾಡಿ ಚಣದಲಿ
ಸಣ್ಣ ಮಿಡಿತವು ಮನದ ಕಡಲಲಿ
ಮಣ್ಣ ಕಣಕಣ ಚಿಗಿತು ಹಾರಿತು ಭಾವದೊಡಲಿನಲಿ
ತನ್ನ ನಲ್ಲನ ಮನದ ಬಯಕೆಗೆ
ಮುನ್ನ ಕಾಣಿಕೆ ಕೊಡುವೆನೆನುತಲಿ
ಚೆನ್ನೆ ನಾಚುತ ಮುಟ್ಟಿ ಕೆನ್ನೆಯ ನಿಲ್ಲದೋಡಿದಳು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಇಷ್ಟು ಸಾಕೆಂದೆದ್ದು ದೂರ ನಡೆದರು ಕೂಡ
ಬಿಟ್ಟುಬಿಡುತ್ತಿಲ್ಲ ಅದೆಂತ ಅಂಟು?
ಎಷ್ಟು ಬಲದಿಂದೊದ್ದು ತಳ್ಳಿದರು ಮತ್ತೆ
ಕೂಡೊ ಬಂಧಕ್ಕದೆಂತ ನಂಟು?

ಹೂವು ಕೀಳಲು ಹೋಗಿ ಚುಚ್ಚಿದರು ಮುಳ್ಳು
ಇನ್ನು ಕಾಡಿದೆಯದರ ದಳದ ಚೆಲುವು
ಹಕ್ಕಿ ಹಾಡನು ಕೇಳಿ ಹಾರುವುದು ಸುಳ್ಳು
ಹೆಕ್ಕಿ ಮುಗಿಯದು ಇಲ್ಲಿ ಅಷ್ಟು ಒಲವು

ಭಾವಬಂಧುರವೆಂದು ನಂಬಿ ನೊಂದರು ಕೂಗಿ
ಮನದ ಮಗುವಿನ ನಗುವು ಮಾಸದಿಲ್ಲಿ
ಹೊರ ಬಯಲಕರೆಗಾಳಿ ಬೀಸಿದರು ಬಲವಾಗಿ
ಮನೆಯ ಮಡಕೆಯ ಚಿಂತೆ ತೀರದಿಲ್ಲಿ

ಎಲ್ಲೊ ದೂರದಿ ಅಲ್ಲಿ ಕೇಳಿ ಮುರಳಿಯ ಸೊಲ್ಲು
ಶ್ರುತಿಯುಗೊಂಡಿದೆ ಈಗ ಹೃದಯವೀಣೆ
ಬಂದೆತ್ತಿಕೋ ನನ್ನ ಗಿರಿಯಂತೆ ಬೆರಳಲ್ಲಿ
ಹರಿದು ಹೋಗಲಿ ಎಲ್ಲ ಭವದ ಬೇನೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#ನೋಟ

ಇದ್ದಿದ್ದರೆ
ಹೆಂಡತಿಯ ನೋಟಕ್ಕೂ
ದೂರ್ವಾಸರ ಶಕ್ತಿ;
ನಾನೆಂದಿಗೋ ಬೂದಿಯಾಗಿ
ಸಿಗುತ್ತಿತ್ತು ಮುಕ್ತಿ...!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
"ಹೂವಿರುವುದು
ದೇವರ ಗುಡಿಯಲ್ಲಿ
ಮತ್ತು
ಹೆಣ್ಣಿನ ಮುಡಿಯಲ್ಲಿ...."

ಅದ್ಯಾಕೋ ಗೊತ್ತಿಲ್ಲ,
ಈ ಮೋಸದ ಬಗ್ಗೆ
ಸಣ್ಣ ಸುಳಿವೂ ಸಿಗಲಿಲ್ಲ ನೋಡು.
ಅಜ್ಜ ಅಪ್ಪ ಅಣ್ಣ ಎಲ್ಲರೂ
ಹೇಳಿದ್ದು ಇದನ್ನೇ,
ಮೊದಮೊದಲು ನನಗೂ ಗೊತ್ತಾಗಲಿಲ್ಲ.
ಮತ್ತೆ ಮತ್ತೆ ಅದನ್ನೇ ಹೇಳಿದಾಗ
ಎಲ್ಲರಂತೆ ನಾನೂ ತಿಳಿದುಕೊಂಡೆ,
ಇದು ಹೀಗೆ
ಅದು ಹಾಗೆ...
ಮತ್ತು
ಇದು ಹೀಗೆಯೇ
ಅದು ಹಾಗೆಯೇ ಅನ್ನುವುದನ್ನು.

ಅದರಾಚೆಯ ಯೋಚನೆಗಳು
ಎಂದೂ ಕಾಡಲಿಲ್ಲ
ತೀರಾ ನಿನ್ನೆಯವರೆಗೂ;
ಹೂವಿಗಾಗಿಯೇ ಹಾರುವ
ದುಂಬಿಯನ್ನು
ಕಾಣುವವರೆಗೂ.

ತೊಟ್ಟ
ಪೊರೆ ಕಳಚಿದರೆ ಮಾತ್ರ;
ಬದುಕಿಲ್ಲಿ
ಹೊಚ್ಚಹೊಸದು...!

ಇದೀಗ,
ಅಪ್ಪ ಕೊಟ್ಟ
ಕನ್ನಡಕ ತೆಗೆದಿರಿಸಿದ್ದೇನೆ
ಮತ್ತು...
ನನ್ನ ಮಗನಿಗೆ ಸಿಗದ ಹಾಗೆ
ದೂರ ಎಸೆದಿದ್ದೇನೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸುರಿದ ಮಳೆಯಲಿ ನಿಂತು ನೆನೆಯುತ
ಸರಿದ ನನ್ನನು ಕದ್ದು ನೋಡಿದ
ಹುರುಪು ನೋಟವು ಮನಕೆ ಚುಚ್ಚಿತು ನೂರು ಹೂಬಾಣ
ಅರಿವು ತಪ್ಪಿತು ಬುದ್ದಿ ಕೆಟ್ಟಿತು
ಮರೆತು ನನ್ನನೆ ನಿನ್ನ ವಶದಲಿ
ತಿರೆಯ ವಿರಹವು ಬಾನ ಮುತ್ತಿಗೆ ಮರೆತು ಹಸುರಾಯ್ತು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಅಂತರಂಗದ ಬನದ ಬಯಕೆಗೆ
ಮಂದಮಾರುತವೊಂದು ಬೀಸಿರೆ
ಚಂದದಿಂದಲಿ ನಗುತ ಹೂಗಳು ಪಯಣ ಸಾರಿದವು
ಸಂದ ಚಣಗಳ ನೆನಪು ಕಳೆಯಲು
ನಿಂತ ಮನೆಗಳ ಮೋಹ ಕಳಚುತ
ಬಂಧ ಬಿಡಿಸುವ ಸೊಗದ ಕನಸನು ಕಣ್ಣು ಬೇಡಿದವು

ತೀರ ಮುತ್ತುವ ಕಡಲದಲೆಯನು
ಸೇರಿ ಸೆಳೆದೆನು ನೀರ ಮಡುವಲಿ
ಚೀರಿಕೊಂಡರು ಕಿವಿಯು ಕೇಳದು ಜನಕೆ ಜಗದಲ್ಲಿ
ಮೀರೆ ಭವದ ಸೆಳೆಯ ಸಂಚನು
ಸಾರಿ ಪಥವ ಕೂಡಿ ನಡೆಯುತ
ಪಾರು ಮಾಡುವ ಪರದ ನಾವಿಕ ಬಂದು ನೋಡಿಲ್ಲಿ

ಮುಡಿದ ಪದಕದ ಬಣ್ಣ ಕಳೆದಿರೆ
ಸಿಡಿದ ಮಾತಿನ ಲೆಕ್ಕ ಕಾಡಲು
ಪಡೆದ ಮಣ್ಣಲಿ ಬಿದ್ದ ಬೀಜದ ಬದುಕು ಬೆಂದಿಹುದು
ಹಿಡಿದು ಮೂವರ ಕಡೆದು ಬೆಣ್ಣೆಯ
ಒಡೆದುದಾರನು ಮುಂದೆ ನಡೆಯಲು
ಹಡೆದ ಶಾಂತಿಯ ಹಕ್ಕಿ ಹಾರಿತು ಬಯಲ ಬಾನಿನಲಿ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು